ಚಿನ್ಮಯಾನಂದ ಸರಸ್ವತಿ
ಜನನ | ಬಾಲಕೃಷ್ಣ ಮೆನನ್ ಮೇ ೮, ೧೯೧೬ ಎರ್ನಾಕುಲಂ, ಕೇರಳ |
---|---|
ಮರಣ | ಆಗಸ್ಟ್ ೩, ೧೯೯೩ ಸ್ಯಾನ್ ಡೀಗೋ, ಕ್ಯಾಲಿಫೋರ್ನಿಯಾ |
ವೃತ್ತಿ | ಹಿಂದೂ ಆಧ್ಯಾತ್ಮ ಗುರುಗಳು |
ಭಗವದ್ಗೀತೆಯನ್ನು ನಮ್ಮ ಕಾಲದ ಜನಕ್ಕೆ ಹತ್ತಿರ ತಂದುಕೊಟ್ಟ ಮಹನೀಯರು ಸ್ವಾಮಿ ಚಿನ್ಮಯಾನಂದರು (ಮೇ ೮, ೧೯೧೬ - ಅಗಸ್ಟ್ ೩, ೧೯೯೩). ‘ಭಗವದ್ಗೀತೆ’ಯನ್ನು ನಮ್ಮ ದಿನಚರಿಯಲ್ಲಿ ಉಪಯೋಗಿಸುವುದು ಹೇಗೆ ಎಂದು ಮನವರಿಕೆ ಮಾಡಿಕೊಟ್ಟ ಮಹನೀಯರು ಸ್ವಾಮಿ ಚಿನ್ಮಯಾನಂದರು. ಅವರ ‘ಭಗವದ್ಗೀತೆ’ಯ ಕುರಿತಾದ ಗೀತಾಜ್ಞಾನ ಯಜ್ಞಗಳೆಂಬ ಉಪನ್ಯಾಸಗಳು, ಪುಸ್ತಕಗಳು ಹೀಗೆ ಭಗವದ್ಗೀತೆಯಲ್ಲಿ ಮತ್ತು ಭಾರತೀಯ ಅಧ್ಯಾತ್ಮಿಕ ತತ್ವದಲ್ಲಿ ಜನಾಸಕ್ತಿಯನ್ನು ಮೂಡಿಸಿದ ಸೇವೆಗಳು ಅದ್ವಿತೀಯವಾದದ್ದು.
ಜೀವನ
[ಬದಲಾಯಿಸಿ]ಮೇ ೮, ೧೯೧೬ರಂದು ಕೇರಳದಲ್ಲಿ ಜನಿಸಿದ ಪೂರ್ವಾಶ್ರಮದ ಬಾಲಕೃಷ್ಣ ಮೆನನ್ನರು ಕಾನೂನು ಮತ್ತು ಇಂಗ್ಲಿಷ್ ಸಾಹಿತ್ಯಗಳಲ್ಲಿ ಸ್ನಾತಕೋತ್ತರ ಪದವೀಧರರು.
ಸ್ವಾತಂತ್ರ್ಯ ಚಳುವಳಿಯಲ್ಲಿ
[ಬದಲಾಯಿಸಿ]ದೇಶದ ಸ್ವಾತಂತ್ರ್ಯಕ್ಕಾಗಿನ ಹೋರಾಟಕ್ಕಿಳಿದ ಅವರು ಬ್ರಿಟಿಷ್ ಸರ್ಕಾರದಿಂದ ಕಾರಾಗೃಹಕ್ಕೆ ತಳ್ಳಲ್ಪಟ್ಟರು. ಸೆರೆಮನೆಯಿಂದ ಹೊರ ಬಂದ ಅವರು ‘ದಿ ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸತೊಡಗಿದ್ದರು.
ಸಾಧುಗಳ ಡೋಂಗಿತನ ಬಯಲು ಮಾಡಹೊರಟರು
[ಬದಲಾಯಿಸಿ]ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಲಕೃಷ್ಣ ಮೆನನ್ನರಿಗೆ, ಹಿಮಾಲಯದಲ್ಲಿ ಸಾಧುಗಳೆಂದು ಹೇಳಿಕೊಳ್ಳುತ್ತಾ ಜೀವಿಸುವ ಸಮುದಾಯದವರ ಕುರಿತಾಗಿ, ಡೋಂಗೀತನದವರು ಎಂಬ ಭಾವವಿತ್ತು. ಹಾಗಾಗಿ ಈ ಜನರ ಡೋಂಗಿತನವನ್ನು ಬಯಲುಮಾಡುವ ‘ವಿಶಿಷ್ಟ ಪತ್ರಿಕಾ ವರದಿ’ ಮೂಡಿಸುವಾಸೆ ಅವರಲ್ಲಿ ಗರಿಗೆದರಿತು. ಈ ಹುಮ್ಮಸ್ಸಿನಲ್ಲಿ ಅವರು ರಿಷಿಕೇಶದಲ್ಲಿರುವ ‘ಆನಂದ ಕುಟೀರ’ದಲ್ಲಿನ ಸ್ವಾಮಿ ಶಿವಾನಂದರ ಆಶ್ರಮಕ್ಕೆ ಪ್ರಯಾಣ ಬೆಳೆಸಿದರು.
ಅನಿರೀಕ್ಷಿತ ತಿರುವು
[ಬದಲಾಯಿಸಿ]ಸಾಧುಜೀವಿಗಳ ಬದುಕಿನ ಬಗೆಗೆ ತಾವು ಭಾವಿಸಿಕೊಂಡಿದ್ದ ವ್ಯತಿರಿಕ್ತ ಬದುಕನ್ನು ಅನ್ವೇಷಿಸ ಹೊರಟಿದ್ದ ಬಾಲಕೃಷ್ಣ ಮೆನನ್ನರ ಯಾತ್ರೆ ಪಡೆದ ತಿರುವು ಅನಿರೀಕ್ಷಿತವಾಗಿತ್ತು. ಬಹಿರ್ಮುಖವಾಗಿ ಹೊರಟಿದ್ದ ಈ ಅನ್ವೇಷಣೆ ಇದ್ದಕ್ಕಿದ್ದಂತೆ ಅಂತರ್ಮುಖವಾಗಿ ಹರಿಯತೊಡಗಿತು. ತಮ್ಮ ಹೊರಗನ್ನು ಅನ್ವೇಷಿಸಿ ಬಯಲು ಮಾಡ ಹೊರಟಿದ್ದ ಅವರು, ತಮ್ಮನ್ನೇ ಅನ್ವೇಷಿಸಿ ಬಯಲುಮಾಡಿಕೊಳ್ಳತೊಡಗಿದರು. ಈ ಪ್ರಕ್ರಿಯೆ ಆಧ್ಯಾತ್ಮಿಕದ ಹಾದಿಯಲ್ಲಿ ಚಿಗುರೊಡೆಯಲಾರಂಭಿಸಿತು.
ಬಿಡುಗಡೆಯ ಹಾದಿ
[ಬದಲಾಯಿಸಿ]ಸ್ವಾಮಿ ಶಿವಾನಂದರ ದೈವೀತೇಜಸ್ಸು, ಪ್ರೇಮ ಮತ್ತು ವೇದಾಂತದ ಬೋಧನೆಗಳು ಈ ಯುವ ಹೃದಯದ ಮೇಲೆ ಅಪಾರವಾದ ಪರಿಣಾಮವನ್ನು ತಂದುಬಿಟ್ಟವು. ಅವರಲ್ಲಿ ಅಂತರಂಗಿಕವಾಗಿ ಅಪೂರ್ವವಾದ ಬದಲಾವಣೆಗಳು ತೆರೆದುಕೊಳ್ಳತೊಡಗಿದವು. ಹೀಗಾಗಿ ಅವರು ತಮ್ಮ ಸ್ವಯಂ ಬದುಕಿನ ಮೂಲ ಉದ್ದೇಶದ ಕಡೆಗೆ ಪ್ರಶ್ನಿಸಿಕೊಳ್ಳಲಾರಂಭಿಸಿ, ಶಾಶ್ವತವಾದ ಸಂತೋಷದ ಒಳಗುಟ್ಟೇನಿರಬಹುದು ಎಂಬ ಕುರಿತು ಶೋಧಕ್ಕೆ ಮೊದಲು ಮಾಡಿದರು.
ಮಹಾನ್ ಸಂತರ ಸಾಂಗತ್ಯ ಮತ್ತು ಅವರ ಬೋಧನೆಗಳನ್ನು ಸವಿಯುವುದರ ಜೊತೆ ಜೊತೆಗೆ ಸ್ವಯಂ ತಾವೇ ಬಿಡುಗಡೆಯ ಹಾದಿಯನ್ನೂ ಆಯ್ದುಕೊಂಡರು. ಫೆಬ್ರುವರಿ ೨೫, ೧೯೪೯ರ ಶಿವರಾತ್ರಿಯ ದಿನದಂದು ಬಾಲಕೃಷ್ಣ ಮೆನನ್ ಅವರು ಸ್ವಾಮಿ ಶಿವಾನಂದರಿಂದ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಿದರು. ಸ್ವಾಮಿ ಶಿವಾನಂದರು ಇವರಿಗೆ ‘ಸ್ವಾಮಿ ಚಿನ್ಮಯಾನಂದ ಸರಸ್ವತಿ’ ಎಂಬ ಹೆಸರನಿಟ್ಟರು. ಚಿನ್ಮಯವೆಂಬುದು ಪರಿಶುದ್ಧವಾದ ಅರಿವು (pure consciousness) ಎಂಬುದರ ಸೂಚಕವಾಗಿದೆ.
ಸ್ವಾಮಿ ಶಿವಾನಂದರು ತಮ್ಮ ಈ ಶಿಷ್ಯ ಚಿನ್ಮಯಾನಂದರನ್ನು ಹಿಮಾಲಯದ ಉತ್ತರಕಾಶಿಯಲ್ಲಿದ್ದ ತಮ್ಮ ಕಾಲದ ಶ್ರೇಷ್ಠ ವೇದಾಂತಿಗಳಾದ ಸ್ವಾಮಿ ತಪೋವನಂ ಅವರ ಬಳಿ ಕಳುಹಿಸಿಕೊಟ್ಟರು. ಸ್ವಾಮಿ ತಪೋವನಂ ಅವರು ಶಿಷ್ಯರನ್ನು ಆಯ್ದುಕೊಳ್ಳುವುದು ಅತೀ ವಿರಳವಾಗಿತ್ತು. ಹಾಗೆ ಆಯ್ದುಕೊಂಡವರನ್ನು ಕೂಡಾ ಅವರು ಹಲವಾರು ಕಠಿಣ ಪರೀಕ್ಷೆಗಳಿಗೆ ಈಡು ಮಾಡಿ, ಅವರಿಗೆ ಅತ್ಯಂತ ಕಟ್ಟುನಿಟ್ಟಾದ ನಿಬಂಧನೆಗಳನ್ನು ವಿಧಿಸುತ್ತಿದ್ದರು. ಈ ಎಲ್ಲವನ್ನೂ ನಿಷ್ಠೆಯಿಂದ ಒಪ್ಪಿಕೊಂಡ ಸ್ವಾಮಿ ಚಿನ್ಮಯಾನಂದರು ಈ ಮಹಾನ್ ಸಂತರಾದ ಸ್ವಾಮಿ ತಪೋವನಂ ಅವರ ಶಿಷ್ಯರಾಗಿ ಸಕಲಸಂಗ ಪರಿತ್ಯಾಗಿಗಳಾಗಿ ವೇದಾಂತದ ಆಳವಾದ ಅಧ್ಯಯನವನ್ನು ಕೈಗೊಂಡರು.
ಸ್ವಾಮಿ ತಪೋವನಂ ಅವರ ಮಾರ್ಗದರ್ಶನ ಮತ್ತು ಕೃಪಾಶೀರ್ವಾದದ ಜೊತೆಗೆ ಗಂಗಾಮಾತೆಯ ಪರಿಶುದ್ಧ ಹರಿವು ಮತ್ತು ಮಾನವಕುಲಕ್ಕಾಗಿನ ಆಕೆಯ ನಿತ್ಯ ಸೇವಾಹರಿವಿನಲ್ಲಿ ಪುನೀತರಾಗಿ ಆಧ್ಯಾತ್ಮಿಕ ಅನುಭಾವವನ್ನು ಪಡೆದುಕೊಂಡ ಸ್ವಾಮಿ ಚಿನ್ಮಯಾನಂದರು, ತಮ್ಮ ಗುರುವಿನಿಂದ ಜನಸಾಮಾನ್ಯರಿಗೆ ವೇದಾಂತದ ಸುಜ್ಞಾನವನ್ನು ತಲುಪಿಸಬೇಕೆಂಬ ಆದೇಶವನ್ನು ಪಡೆದರು. ಭಾರತದ ಎಲ್ಲೆಡೆಗಳಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಅವನತಿಯನ್ನು ವ್ಯಾಪಕವಾಗಿ ಕಂಡಿದ್ದ ಸ್ವಾಮಿ ಚಿನ್ಮಯಾನಂದರಿಗೆ ತಾವು ಪಡೆದ ಜ್ಞಾನ ಮತ್ತು ಸಂತೃಪ್ತ ಭಾವವನ್ನು ಎಲ್ಲೆಡೆ ಕೊಂಡೊಯ್ಯಬೇಕೆಂಬ ಹಂಬಲವು ಹೀಗೆ ಕೂಡಿಬಂತು.
ಜ್ಞಾನ ಯಜ್ಞ
[ಬದಲಾಯಿಸಿ]ಸ್ವಾಮಿ ಚಿನ್ಮಯಾನಂದರ ಉಪನ್ಯಾಸಗಳಿಗೆ ಜ್ಞಾನ ಯಜ್ಞವೆಂದು ಹೆಸರು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶಗಳಿಗೆ ಜ್ಞಾನ ಯಜ್ಞವೆಂಬ ಉಲ್ಲೇಖವಿದೆ. ದಿವ್ಯ ಜ್ಞಾನದ ಸಂಪಾದನೆಗಾಗಿ ನಿಷ್ಠ ಅಭಿಲಾಷಿಯು ನಡೆಸುವ ಶ್ರದ್ಧಾವಂತ ಶಾಸ್ತ್ರಾಧ್ಯಯನಕ್ಕೆ ಯಜ್ಞವೆಂದು ಹೆಸರು. ಸ್ವಾಮಿ ಚಿನ್ಮಯಾನಂದರು ತಮ್ಮ ಮೊದಲ ಜ್ಞಾನಯಜ್ಞವೆಂಬ ಸರಣಿ ಉಪನ್ಯಾಸಗಳನ್ನು ೧೯೫೧ರ ಡಿಸೆಂಬರ್ ಮಾಸದಲ್ಲಿ ಪುಣೆಯಲ್ಲಿನ ಪುಟ್ಟ ದೇಗುಲವೊಂದರಲ್ಲಿ ನಡೆಸಿಕೊಟ್ಟರು.
ಸ್ವಾಮಿ ಚಿನ್ಮಯಾನಂದರ ಉಪನ್ಯಾಸಗಳು, ವೇದಗಳ ಅಧ್ಯಯನ ಮತ್ತು ಸ್ವಯಂ ನೇರ ಅನುಭಾವಗಳಿಂದ ಶ್ರೀಮಂತವಾಗಿದ್ದವು. ದಿನೇ ದಿನೇ ಸ್ವಾಮಿ ಚಿನ್ಮಯಾನಂದರ ಸೃಜನಶೀಲ, ವಿವೇಕಯುಕ್ತ, ಸಂವೇದನಾಶೀಲ ಮತ್ತು ಹಾಸ್ಯದ ಲೇಪನವನ್ನುಳ್ಳ ಆಕರ್ಷಕ ಶೈಲಿಯ ಉಪನ್ಯಾಸಗಳು ವಿಶ್ವದೆಲ್ಲೆಡೆಯಿಂದ ಸಹಸ್ರಾರು ಜನರನ್ನಾಕರ್ಷಿಸತೊಡಗಿದವು. ಹೀಗೆ ಬೆಳೆದ ಅವರ ಅಭಿಮಾನೀಬಳಗವು 1953ರಲ್ಲಿ ’ಚಿನ್ಮಯ ಮಿಷನ್’ ಎಂಬ ಸಂಘಟನೆಗೆ ಚಾಲನೆಯನ್ನು ನೀಡಿತು.
ವಿಶ್ವದಾದ್ಯಂತ ತಮ್ಮ ಬಳಿ ಬಂದ ಆಸಕ್ತರಿಗೆಲ್ಲಾ ಸ್ವಾಮಿ ಚಿನ್ಮಯಾನಂದರು ಅತ್ಯಂತ ಪ್ರೀತಿಯಿಂದ ಬೋಧಿಸಿದರು. ಆಗಸ್ಟ್ ೩, ೧೯೯೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿದ್ದ ಸಂದರ್ಭದಲ್ಲಿ ತಮ್ಮ ಇಹಲೋಕದ ಯಾತ್ರೆಯನ್ನು ಪೂರೈಸಿದ ಈ ತಪಸ್ವಿಗಳು ವಿಶ್ವದಾದ್ಯಂತ ಸಂಚರಿಸಿ ೫೭೬ಜ್ಞಾನ ಯಜ್ಞಗಳನ್ನೂ, ಅಸಂಖ್ಯಾತ ಆಧ್ಯಾತ್ಮಿಕ ಶಿಬಿರಗಳನ್ನೂ ನಡೆಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೋಟ್ಯಾಂತರ ಹೃದಯಗಳನ್ನು ಸಂವೇದಿಸಿದರು.
ಗ್ರಂಥ ರಚನೆ
[ಬದಲಾಯಿಸಿ]ವಿಶ್ವದೆಲ್ಲೆಡೆಯ ಪ್ರಯಾಣ, ಬಿಡುವಿಲ್ಲದ ಕಾರ್ಯಕ್ರಮಗಳು ಮತ್ತು ಕ್ರಮೇಣವಾಗಿ ಶಿಥಿಲಗೊಳ್ಳುತ್ತಿದ್ದ ದೇಹ ವ್ಯವಸ್ಥೆ, ಇವ್ಯಾವುದನ್ನೂ ಲೆಖ್ಖಿಸದ ಸ್ವಾಮಿ ಚಿನ್ಮಯಾನಂದರು ೩೫ಕ್ಕೂ ಹೆಚ್ಚು ಮಹತ್ವಪೂರ್ಣ ಗ್ರಂಥಗಳನ್ನು ರಚಿಸಿದರು. ಅವುಗಳಲ್ಲಿ ಉಪನಿಷತ್ತು ಮತ್ತು ಭಗವದ್ಗೀತೆಯ ಕುರಿತಾದ ವಿಶ್ಲೇಷಣೆಗಳು ಪ್ರಮುಖವಾಗಿವೆ. ಭಗವದ್ಗೀತೆಯ ಕುರಿತಾದ ಅವರ ರಚನೆಯಂತೂ ಅತ್ಯದ್ಬುತವಾದ ವಿಶ್ಲೇಷಣೆ, ದಿವ್ಯ ಅನುಭಾವ, ಅತ್ಯಂತ ರಚನಾತ್ಮಕ, ಜೀವನದಲಿ ಅಳವಡಿಕೆಗೆ ಯೋಗ್ಯ, ಸುಂದರ ನಿದರ್ಶನಗಳು ಮತ್ತು ಅನುಭೂತಿಗಳನ್ನು ಹೊತ್ತುಕೊಂಡ ಶ್ರೇಷ್ಠ ಕೃತಿ ಎನಿಸಿದೆ. ಭಗವದ್ಗೀತೆಯ ಕುರಿತಾದ ಸ್ವಾಮಿ ಚಿನ್ಮಯಾನಂದರ ಪ್ರವಚನಗಳ ವಿಡಿಯೋ ಪ್ರತಿಗಳು ವಿಶ್ವದೆಲ್ಲೆಡೆ ಪ್ರಖ್ಯಾತಿಯನ್ನು ಗಳಿಸಿವೆ.
ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಆದಿ ಶಂಕರರ ಕೃತಿ, ಚಿಂತನೆ ಮತ್ತು ಕಾರ್ಯಗಳ ಪರಿಚಯವನ್ನು ವಿಶ್ವದೆಲ್ಲೆಡೆ ಕೊಂಡೊಯ್ಯುವುದರ ಮೂಲಕ ಸ್ವಾಮಿ ಚಿನ್ಮಯಾನಂದರು ಮಾಡಿದ ಕ್ರಾಂತಿ ಅಪೂರ್ವವಾದದ್ದು. ತಮ್ಮ ಬರವಣಿಗೆಗಳಲ್ಲಿ ಮತ್ತು ಉಪನ್ಯಾಸಗಳಲ್ಲಿ ಸ್ವಾಮಿ ಚಿನ್ಮಯಾನಂದರು ನೀಡುತ್ತಿದ್ದ ಆಳ, ಸ್ಪಷ್ಟತೆ, ನಿಖರತೆ, ಆಕರ್ಷಣೆ, ಹಾಸ್ಯ ಮನೋಭಾವ ಮತ್ತು ಅನುಭೂತಿಗಳು ಸರಿಸಾಟಿಯಿಲ್ಲದ್ದು. ತಮ್ಮ ಕೊನೆಯ ಉಸಿರಿರುವವರೆಗೂ ಬಿಡುವಿಲ್ಲದಂತೆ ಅದ್ವೈತ ವೇದಾಂತದ ಸೌಗಂಧವನ್ನು ತಾವು ಹೋದಲ್ಲೆಲ್ಲಾ ಪಸರಿಸಿದರು.
ಚಿನ್ಮಯ ಮಿಷನ್
[ಬದಲಾಯಿಸಿ]ನಲವತ್ತೆರಡು ವರ್ಷಗಳ ಕಾಲ ಅಹರ್ನಿಶಿ ದುಡಿದ ಸ್ವಾಮಿ ಚಿನ್ಮಯಾನಂದರ ಶ್ರಮದ ಫಲವಾಗಿ ಇಂದು ಚಿನ್ಮಯ ಮಿಷನ್ ಸಂಘಟನೆಯು ಮಹತ್ವದ ಸಂಘಟನೆಯಾಗಿ ಬೆಳೆದು ನಿಂತಿದ್ದು ಆಧ್ಯಾತ್ಮಿಕ ಔನ್ನತ್ಯಗಳ ಜೊತೆ ಜೊತೆಗೆ ವಿದ್ಯಾಭ್ಯಾಸ, ಬಡತನ ನಿವಾರಣೆ, ವೈದ್ಯಕೀಯ ಮತ್ತು ನೂರಾರು ಸಮಾಜಸೇವಾ ಕಾರ್ಯಗಳಲ್ಲಿ ತನ್ನದೇ ಆದ ರೀತಿಯ ಕೊಡುಗೆಗಳನ್ನು ನೀಡುತ್ತಾ ಮುಂದೆ ಸಾಗಿದೆ. ಸ್ವಾಮಿ ಚಿನ್ಮಯಾನಂದರ ಬದುಕು ಸೀಮಾತೀತ ಶಕ್ತಿ, ಪ್ರೇಮ, ಸೇವೆ ಮತ್ತು ಆಧ್ಯಾತ್ಮ ಶಕ್ತಿಗಳ ಮಹಾನ್ ಸಂಗಮವಾಗಿದೆ.
ಬಾಹ್ಯ ಸಂಪರ್ಕ
[ಬದಲಾಯಿಸಿ]- ಚಿನ್ಮಯ ಮಿಷನ್ ಜಾಲತಾಣ[೧]